Monday, July 11, 2011

ಅಪ್ಪನಿಲ್ಲದ ಈ ಸಲದ ಅಪ್ಪಂದಿರ ದಿನ..

ಜೂನ್ ತಿಂಗಳ ಮೂರನೆ ಭಾನುವಾರವನ್ನು 'ಅಪ್ಪಂದಿರ ದಿನ' ಎಂದು ಆಚರಿಸುತ್ತಾರೆ ಎಂದು ನನಗೆ ತಿಳಿದಿದ್ದೇ ಮೂರೋ-ನಾಲ್ಕೋ ವರುಷಗಳ ಹಿಂದೆ. ಆ ಸಲದ ಜೂನ ಮೂರನೆ ಭಾನುವಾರ ಗೆಳೆಯನೊಂದಿಗೆ ಯಾವುದೋ ಮಾಲಿಗೆ ಹೋಗಿದ್ದ ನಾನು, ಅಲ್ಲಿನ ಜಾಹೀರಾತಿನಿಂದ ಅಪ್ಪಂದಿರ ದಿನದ ಬಗ್ಗೆ ತಿಳಿದು ಅಪ್ಪನಿಗೆ ಒಂದು ಟಿ-ಷರ್ಟು ಕೊಂಡು ತಂದಿದ್ದೆ. ಅದಾದ ನಂತರ ಪ್ರತೀ ಅಪ್ಪಂದಿರ ದಿನಕ್ಕೂ ಅಪ್ಪ ಬೆಂಗಳೂರಿನಲ್ಲಿದ್ದರೆ ಯಾವುದೋ ಚಿಕ್ಕ ಕಾಣಿಕೆ ಕೊಟ್ಟು, ಊರಲ್ಲಿದ್ದರೆ ಫೋನು ಮಾಡಿ ಶುಭಾಶಯ ಹೇಳುತ್ತಿದ್ದೆ. ಆದರೆ ಈ ಸಲದ ಅಪ್ಪಂದಿರ ದಿನಕ್ಕೆ ಅಪ್ಪನಿಗೆ ಕಾಣಿಕೆಯೂ ಇಲ್ಲ, ಶುಭಾಶಯವೂ ಇಲ್ಲ, ಯಾಕೆಂದರೆ ಈ ಸಲ ಅವನೇ ಇಲ್ಲಾ.. ಮೊನ್ನೆಯ ಫೆಬ್ರುವರಿಯಲ್ಲಿ ಈ ಲೋಕದ ವ್ಯಾಪಾರ ಮುಗಿಸಿಹೋಗಿದ್ದಾನೆ ಆತ. ನೀರುಗಣ್ಣು ಮಾಡಿಕೊಂಡು ಅವನನ್ನು ನೆನಪಿಸಿಕೊಳ್ಳುವುದೊಂದೇ ನಾನು ಈ ಸಲದ ಅಪ್ಪಂದಿರ ದಿನದಿಂದ ಮಾಡಬಹುದಾದದ್ದು..

--------------------------------------------------------------------------------------


ಅಪ್ಪನ ವೃತ್ತಿ ಮಾಸ್ತರಿಕೆ. ಪ್ರವೃತ್ತಿ ಕೂಡ ಮಾಸ್ತರಿಕೆಯೇ.. ಮುಂಜಾನೆ ಶಾಲೆಯಲ್ಲಿ ಮಾಸ್ತರಿಕೆ.. ಸಾಯಂಕಾಲದಲ್ಲಿ ಮನೆಯಲ್ಲಿ ಮಾಸ್ತರಿಕೆ.. ಹೇಳಿ ಕೇಳಿ ನಾವಿದ್ದುದು ಒಂದು ಹಳ್ಳಿ. ಅದೂ ಜಿಲ್ಲಾ ಸ್ಥಳವಾದ ಧಾರವಾಡದಿಂದ ನೂರು ಕಿಲೋಮೀಟರ ದೂರವಿದ್ದ ಕುಗ್ರಾಮ. ವಿದ್ಯಾಭ್ಯಾಸದ ಬಗ್ಗೆ ಆವಾಗ ಅಷ್ಟೊಂದು ಜಾಗ್ರತಿ ಊರಲ್ಲಿ ಆಗಿರಲಿಲ್ಲ. ನನ್ನ ಅಪ್ಪನಂತವರಷ್ಟು ಬೇರೆ ಊರಿಂದ ಮಾಸ್ತರ್ರಾಗಿ ಬಂದವರನ್ನು ಬಿಟ್ಟರೆ, ಉಳಿದ ಮಾಸ್ತರುಗಳು ಊರಲ್ಲಿಯೇ ಹೊಲ-ಮನೆ ನೋಡಿಕೊಂಡು, ಅಂಗಡಿ-ವ್ಯಾಪಾರ-ವ್ಯವಹಾರ ಮುಖ್ಯ ಉದ್ಯೋಗ ಮಾಡಿಕೊಂಡು ಮಾಸ್ತರಿಕೆಯನ್ನು ಸೈಡ್ ಬಿಸಿನೆಸ್ ಮಾಡಿಕೊಂಡಿರುವವರು. ಹೀಗಾಗಿ ಕಲಿಕೆಯ ಬಗ್ಗೆ ಅಷ್ಟಿಷ್ಟು ಆಸಕ್ತಿ ಇದ್ದ ಕೆಲ ಹುಡುಗರಿಗೂ ಅವಕಾಶವಿರಲಿಲ್ಲ. ಅದಕ್ಕಾಗಿ ಅಪ್ಪ ಅಂತಹ ವಿದ್ಯಾರ್ಥಿಗಳನ್ನು ಸಂಜೆ ನಮ್ಮ ಮನೆಯಲ್ಲಿ ಕೂಡಿಸಿಕೊಂಡು ಶಾಲೆಯಲ್ಲಿ ತಾನು ಕಲಿಸದ ಗಣೀತ-ವಿಜ್ಞಾನ-ಹಳೆಗನ್ನಡಗಳನ್ನು ಯಾವುದೇ ಫೀ ಇಲ್ಲದೇ ಹೇಳಿ ಕೊಡುತ್ತಿದ್ದ. ಅವರನ್ನು ವಿವಿಧ ಸ್ಕಾಲರ್‌ಷಿಪ್ ಪರೀಕ್ಷೆಗಳಿಗೆ ತಯಾರು ಮಾಡುತ್ತಿದ್ದ. ಅಪ್ಪನ ಗರಡಿಯಲ್ಲಿ ತಯಾರಾದ ಹಲವಾರು ವಿದ್ಯಾರ್ಥಿಗಳು ಕಿತ್ತೂರಿನ ಬಾಲಕಿಯರ ವಸತಿ ಶಾಲೆ, ಸಂಡೂರಿನ ವಸತಿ ಶಾಲೆ, ನಂತರ ನವೋದಯ ಶಾಲೆಗಳ ಪ್ರವೇಶ ಪರೀಕ್ಷೆಗಳಲ್ಲಿ ಪಾಸಾಗಿದ್ದರು.



ಇಂತಹ ವಿದ್ಯಾರ್ಥಿ ವೃಂದ ಹೆಚ್ಚು ಕಡಿಮೆ ನಮ್ಮ ಮನೆಯಲ್ಲಿಯೇ ಇರುತ್ತಿತ್ತು. ಮೂರು ಸಂಜೆಗೆ ಕೈಯಲ್ಲಿ ಕಂದೀಲು ಹಿಡಿದು ನಮ್ಮ ಮನೆಗೆ ಬರುತ್ತಿದ್ದ ಅವರಿಗೆ ಅಪ್ಪ ದಿನದ ಪಾಠ ಹೇಳಿಕೊಡುತ್ತಿದ್ದ. ಪಾಠ ಮುಗಿದ ಮೇಲೆ ಮನೆಗೆ ಹೋಗಿ ರಾತ್ರಿ ಊಟ ಮಾಡಿ ವಾಪಸು ನಮ್ಮ ಮನೆಗೆ ಬರುತ್ತಿದ್ದ ಅವರು ರಾತ್ರಿ ಓದಿಕೊಳ್ಳುತ್ತ, ತಮಗೇನಾದರೂ ಸಮಸ್ಯೆ ಇದ್ದರೆ ಅಪ್ಪನ ಹತ್ತಿರ ಕೇಳಿ ತಿಳಿದುಕೊಳ್ಳುತ್ತಿದ್ದರು. ರಾತ್ರಿ ನಮ್ಮ ಮನೆಯಲ್ಲಿಯೇ ಮಲಗಿಕೊಳ್ಳುತ್ತಿದ್ದರು. ಬೆಳಗೂ ಮುಂಜಾನೆ ಎದ್ದು, ಅಪ್ಪನ ಜೊತೆಗೆ ನದಿಗೆ ಸ್ನಾನಕ್ಕೆ ಹೋಗಿ ಬಂದು ವಿದ್ಯಾರ್ಥಿ ಗಣ ತಮ್ಮ ಮನೆಗೆ ಹೋಗಿ, ಅಲ್ಲಿಂದಲೇ ಶಾಲೆಗೆ ಹೋಗುತ್ತಿದ್ದರು. ಹೀಗಾಗಿ ವಿದ್ಯಾರ್ಥಿಗಳ ಹಾಸಿಗೆ ಕಟ್ಟು, ಅವರ ಪುಸ್ತಕಗಳ ಕಟ್ಟು ಮತ್ತು ಅವೆರಡರಲ್ಲಿ ಸೇರಿಕೊಂಡು ನಮ್ಮ ಮನೆ ಸೇರಿದ ಅಗಾಧ ಸಂಖ್ಯೆಯ ತಗಣಿಗಳ ಸೈನ್ಯ ಯಾವಾಗಲೂ ನಮ್ಮ ಮನೆಯಲ್ಲಿರುತ್ತಿದ್ದವು!



ಜೋಳಿಗೆ ಅನ್ನುವುದು ಈಗಿನ ರೆಸಾರ್ಟುಗಳಲ್ಲಿರುವ ಹ್ಯಾಮಕ್‌ಗಳ ಪ್ರಾಚೀನ ರೂಪವೆನ್ನಬಹುದು. ಆಗ ಅವುಗಳನ್ನು ಸಣ್ಣ ಕೂಸುಗಳನ್ನು ಮಲಗಿಸಲು ಉಪಯೋಗಿಸುತ್ತಿದ್ದರು. ನನಗೆ ತಕ್ಕ ಮಟ್ಟಿಗೆ ದೊಡ್ಡವನಾದರೂ ಜೋಳಿಗೆಯಲ್ಲಿಯೇ ಮಲಗುವ ಅಭ್ಯಾಸವಿತ್ತು. ನಮ್ಮ ಪಡಸಾಲೆಯಲ್ಲಿದ್ದ ಜೋಡು ಕಂಬಗಳಿಗೆ ಒಂದು ಹಗ್ಗ ಕಟ್ಟಿ ಅದಕ್ಕೆ ಒಂದು ಕಂಬಳಿ ಮಡಿಚಿ ಹಾಕಿ ಜೋಳಿಗೆ ಮಾಡಿಕೊಂಡು ಅದರಲ್ಲಿ ಜಿಗಿದು ಏರಿ ನಾನು ಮಲಗಿರುತ್ತಿದ್ದೆ. ಪಡಸಾಲಿಯಲ್ಲಿ ತನ್ನ ವಿದ್ಯಾರ್ಥಿಗಳಿಗೆ ಅಪ್ಪ ಹೇಳುತ್ತಿದ್ದ ಪಾಠಗಳನ್ನು ಜೋಳಿಗೆಯಿಂದಲೇ ಕೇಳುತ್ತಲೇ ನಿದ್ದೆಗೆ ಜಾರಿಕೊಳ್ಳುತ್ತಿದ್ದೆ. (ಹೀಗಾಗಿ ಮುಂದೆ ದೊಡ್ಡವನಾಗಿ ಕಾಲೇಜುಗಳಲ್ಲಿ ಮೇಷ್ಟ್ರುಗಳು ಪಾಠಮಾಡುವಾಗ ನಿದ್ದೆ ಮಾಡುವುದು ನನಗೆ ಸಹಜವಾಗಿ ಬಂತು. ಇರಲಿ..:-) ) ನಾಟಕ ರಚನೆ- ನಿರ್ದೇಶನದಲ್ಲಿ ಅಷ್ಟಿಷ್ಟು ಪರಿಶ್ರಮವಿದ್ದ ಅಪ್ಪ, ತನ್ನ ವಿದ್ಯಾರ್ಥಿಗಳಿಗೂ ಅದರಲ್ಲಿ ಪ್ರೋತ್ಸಾಹಿಸುತ್ತಿದ್ದ. ಅಪ್ಪನ ವಿದ್ಯಾರ್ಥಿಗಣ ತಿಂಗಳಿಗೊಂದು ಸಲ ಸಂಜೆ ತಮ್ಮ ಪಾಠವೊಂದನ್ನೋ, ಆಗಿನ ವರ್ತಮಾನ ಪತ್ರಿಕೆಗಳಲ್ಲಿ ಬಂದಿದ್ದ ಮುಖ್ಯ ಘಟನೆಯನ್ನೋ ನಾಟಕವಾಗಿ ಪರಿವರ್ತಿಸಿ, ತಮ್ಮ-ತಮ್ಮಲ್ಲಿ ಪಾತ್ರ ಹಂಚಿಕೆ ಮಾಡಿಕೊಂಡು ನಟಿಸಿ ತೋರಿಸುತ್ತಿದ್ದರು. ಆ ನಾಟಕ ನೋಡಲು ನಮ್ಮ ಓಣಿಯ ಜನರೆಲ್ಲ ನಮ್ಮ ಮನೆಗೆ ಬಂದಿರುತ್ತಿದ್ದರು. ಬಹುತೇಕ ಆ ಎಲ್ಲ ನಾಟಕಗಳನ್ನು ನಾನು ನನ್ನ ಪಡಸಾಲಿಯ ಜೋಳಿಗೆಯಂಬ ಬಾಲ್ಕನಿಯಿಂದ ನೋಡಿ ಖುಷಿ ಪಟ್ಟಿದ್ದೆ. ಸ್ವಲ್ಪ ದಿನ ತನ್ನ ಕೆಲ ಆಸಕ್ತ ಸ್ನೇಹಿತರಿಗೆ ಅಪ್ಪ ಪ್ರತೀ ಸಂಜೆ ಕುಮಾರವ್ಯಾಸ ಭಾರತದ ಒಂದೋಂದು ಭಾಗವನ್ನು ಓದಿ, ವಿವರಿಸಿ ಹೇಳುತ್ತಿದ್ದ. ನನ್ನ ಭಾರತ ಶ್ರವಣವಾಗುತ್ತಿದ್ದುದು ಕೂಡ ಕೇರ್ ಆಫ್ ಜೋಳಿಗೆಯಿಂದಲೇ ! ( ನಾನು ಕೆಲಸ ಹಿಡಿದ ಮೇಲೆ, ಆಗಾಗ ಬೆಂಗಳೂರಿಗೆ ಬಂದಾಗ ಕೂಡ ನನ್ನ ಕೋರಿಕೆಯಂತೆ ಅಪ್ಪ ಭಾರತವಾಚನ ಮಾಡುತ್ತಿದ್ದ. ಅದೄಷ್ಟವಶಾತ್ ಅಪ್ಪನ ಭಾರತವಾಚನದ ಬಹುತೇಕ ಭಾಗವನ್ನು ನಾನು ರಿಕಾರ್ಡ ಮಾಡಿಟ್ಟಿದ್ದೇನೆ. )



ನನ್ನ ಬಾಲ್ಯದ ಆ ಕಾಲದಲ್ಲಿ ನನಗೆ ಅಪ್ಪನ ನೇರ ಸಹವಾಸ ಸಿಕ್ಕಿದ್ದೇ ಕಡಿಮೆ. ಏನಾದರೂ ಸಿಕ್ಕಿದ್ದರೆ ಅದು ನಾನು ಹಟಮಾಡಿ, ಶಟಗೊಂಡಾಗ ಅವನು ಕೊಟ್ಟ ಬಿಸಿ-ಬಿಸಿ ಕಜ್ಜಾಯ ಮಾತ್ರ. ಅದೂ ಒಂದು ಸಲ ಅಜ್ಜಿ ನನಗೆ ಸ್ನಾನ ಮಾಡಿಸುತ್ತಿರಬೇಕಾದರೆ ನನಗೆ ಹಟ ಬಂದು, ನಾನು ಬಚ್ಚಲಲ್ಲೇ ಅಡ್ಡ ಮಲಗಿ ಸ್ನಾನ ಸತ್ಯಾಗೃಹ ಮಾಡುತ್ತಿದ್ದಾಗ ಅಪ್ಪ ನನ್ನ ಕುಂಡಿಗೆ ಬಿಸ್ಕೀಟು ಕೊಟ್ಟದ್ದು ಇನ್ನೂ ನೆನಪಿದೆ!



ನಾನು ಶಾಲೆಗೆ ಹೋಗಲು ಶುರುಮಾಡಿದ ಮೇಲೆ ಅಪ್ಪ ನನ್ನ ಜೀವನದಲ್ಲಿ 'ಅಪ್ಪ' ಪಾತ್ರದ ಜೊತೆಗೆ 'ಗುರು' ಪಾತ್ರವನ್ನೂ ನಿಭಾಯಿಸತೊಡಗಿದ. ನನಗೂ, ಮತ್ತು ನನ್ನ ಜೊತೆಯಲ್ಲಿ ಓದುತ್ತಿದ್ದ ನನ್ನ ಕೆಲ ಗೆಳೆಯರನ್ನು ಸೇರಿಸಿಕೊಂಡು ಮನೆಯಲ್ಲಿ ಪಾಠ ಶುರುಮಾಡಿದ. ಪಾಠದ ಸಮಯದಲ್ಲಿ, ಆಗಿನ ಹೆಚ್ಚು ಕಡಿಮೆ ಎಲ್ಲಾ ಮಾಸ್ತರುಗಳಂತೆ, ಮಗನಾದ ನನಗೆ ಅಪ್ಪ ಯಾವುದೇ ರಿಯಾಯತಿ ತೋರಿಸುತ್ತಿರಲ್ಲ. ಇನ್ ಫ್ಯಾಕ್ಟ್ ಏನಾದರೂ ಸ್ವಲ್ಪ ತಪ್ಪಾದರೂ ಉಳಿದವರಿಗಿಂತ ಒಂಚೂರು ಹೆಚ್ಚೆ ಬಯ್ಯುತ್ತಿದ್ದ. ಆದರೂ ಈ ಕಾಲದಲ್ಲಿ ನಾನು ಅಪ್ಪನ ಜೊತೆಗೆ ಬಹಳ ಫಲಯುಕ್ತವಾದ ಸಮಯ ಕಳೆದ ಸಮಾಧಾನವಿದೆ. ಆಗ ಅಪ್ಪ ಕಲಿಸಿದ ‘ಲೋಹಿತಾಶ್ವನ ಸಾವು’ ಕಾವ್ಯ ಖಂಡದ ಸಾಲುಗಳು ಈಗಲೂ ಕಣ್ಣೀರು ತರಿಸುತ್ತವೆ. ಆಗ ಅಪ್ಪ ಪ್ರವಾಸ ಕರೆದುಕೊಂಡು ಹೋಗಿ ತೋರಿಸಿದ್ದ ಬದಾಮಿ-ಬನಶಂಕರಿ- ಐಹೊಳಿ- ಪಟ್ಟದಕಲ್ಲು - ಮಹಾಕೂಟಗಳು ನನ್ನ ಮನಸ್ಸಿನ ಮೇಲೆ ಅಚ್ಚಳಿಯದೇ ಉಳಿದಿವೆ. ಕೊಣ್ಣುರಿನ ತೋಟಗಾರಿಕಾ ಇಲಾಖೆಯ ತೋಟಕ್ಕೆ ಕರೆದುಕೊಂಡು ಹೋಗಿ ಅಪ್ಪ ಗಿಡಗಳಿಗೆ ಕಸಿ ಮಾಡುವುದನ್ನು ತೋರಿಸಿದ್ದ. ಮನೆಯಲ್ಲಿಯೇ ನಮ್ಮ ವಿಜ್ಞಾನದ ಪಠ್ಯದಲ್ಲಿದ್ದ ಪ್ರಯೋಗಗಳನ್ನು ಮಾಡಿತೋರಿಸುತ್ತಿದ್ದ. 'ಬಾಲವಿಜ್ಞಾನ' ಎಂಬ ಹೆಸರಿನ ಮಕ್ಕಳ ವಿಜ್ಞಾನ ಪತ್ರಿಕೆಯನ್ನು ನಮ್ಮಿಂದ ಓದಿಸುತ್ತಿದ್ದ. ಅಪ್ಪ ಮಾಡಿತೋರಿಸಿದ ವಿಜ್ಞಾನದ ಪ್ರಯೋಗಗಳಿಂದ / ಓದಿಸಿದ ಪತ್ರಿಕೆಗಳಿಂದ ನಾನು-ನನ್ನ ಸಹಪಾಠಿಗಳು ವಿಜ್ಞಾನಿಗಳಾಗಗದಿದ್ದರೂ, ಅಂದು ಅವು ನಮ್ಮಲ್ಲಿ ವಿಜ್ಞಾನದ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟಿಸಿದ್ದಂತೂ ಸುಳ್ಳಲ್ಲ.

ಮುಂದೆ ಅಪ್ಪ ಮಾಡಿಸಿದ ತಯಾರಿಯಿಂದಾಗಿ ನವೋದಯ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಪಾಸಾಗಿ ನಾನು ಧಾರವಾಡ ಸೇರಿದರೂ ಅಪ್ಪ-ನನ್ನ ಸಹವಾಸವೇನು ಕಡಿಮೆಯಾಗಲಿಲ್ಲ. ಪ್ರತೀ ಸೋಮವಾರ ಅಪ್ಪ ನನಗೊಂದು ಪತ್ರ ಬರೆಯುತ್ತಿದ್ದ. ಒಂದೊಂದು ವಾರ ಒಂದೊಂದು ವಿಷಯದ ಬಗ್ಗೆ ಒಂದೊಂದು ಭಾಷೆಯಲ್ಲಿ - ಕನ್ನಡ, ಇಂಗ್ಲೀಷು ಮತ್ತು ಹಿಂದಿ- ಯಲ್ಲಿ ಪತ್ರ ಬರೆಯುತ್ತಿದ್ದ. ಪ್ರತಿ ತಿಂಗಳ ಮೊದಲ ಭಾನುವಾರದ ಪಾಲಕರ ಭೇಟಿಗೆ ಬರುವಾಗ ಅವ್ವ ಕಟ್ಟಿಕೊಟ್ಟಿರುತ್ತಿದ್ದ ತಿಂಡಿಯ ಚೀಲವನ್ನು ಕೊಡುತ್ತ "ಇದು ಹೊಟ್ಟಿಗೆ" ಎಂದು, ಸಮಾಜ ಪುಸ್ತಕಾಲಯದಲ್ಲೋ, ಮನೋಹರ ಗ್ರಂಥಮಾಲೆಯಲ್ಲೋ, ಇಲ್ಲವೇ ಹುಬ್ಬಳ್ಳಿಯ ಸಾಹಿತ್ಯ ಭಂಡಾರದಿಂದ ಕೊಂಡು ತಂದ ಯಾವುದಾದರೂ ಆಸಕ್ತಿಕರ ಪುಸ್ತಕವನ್ನು ಕೊಡುತ್ತ "ಇದು ನೆತ್ತಿಗೆ" ಎಂದು ಹೇಳುತ್ತಿದ್ದ. ನಮ್ಮ ರಜೆ ಬಿಟ್ಟಾಗ ಊರಿಗೆ ಕರೆದುಕೊಂಡು ಹೋಗಲು ಬರುತ್ತಿದ್ದ ಅಪ್ಪ ಆಗ ಧಾರವಾಡವನ್ನು ಸುತ್ತಿಸುತ್ತಿದ್ದ. ಅಪ್ಪನೊಂದಿಗೆ ಧಾರವಾಡ ಸುತ್ತುವುದೇ ಒಂದು ದಿವ್ಯ ಅನುಭೂತಿಯಾಗಿರುತ್ತಿತ್ತು - ಹೆಜ್ಜೆಗೊಂದು ಇತಿಹಾಸದ ಕುರುಹುಗಳನ್ನು ಹೊಂದಿರುವ ಧಾರವಾಡ ಪಟ್ಟಣದ್ದೇ ಅಷ್ಟು ದಿವ್ಯತೆಯೋ, ಅಥವಾ ಅಪ್ಪ ಕೊಡುತ್ತಿದ್ದ ವಿವರಣೆ ಧಾರವಾಡವನ್ನು ಅಷ್ಟು ದಿವ್ಯವಾಗಿಸಿತ್ತೋ ನನಗಿನ್ನೂ ಬಗೆಹರಿದಿಲ್ಲ. ಕರ್ನಾಟಕ ಕಾಲೇಜಿಗೆ ಕರೆದುಕೊಂಡು ಹೋದ ಅಪ್ಪ, ಉತ್ತರ ಕರ್ನಾಟಕ, ದಕ್ಷಿಣ ಮರಾಠಾ ಪ್ರಾಂತ ಎಂದು ಕರೆಸಿಕೊಂದು ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದಿದ್ದಾಗ ಅರಟಾಳ ರುದ್ರಗೌಡರು, ರೊದ್ದ ಶ್ರೀನಿವಾಸರಾಯರು ಹೇಗೆ ವಂತಿಗೆ ಕೂಡಿಸಿ ಕರ್ನಾಟಕ ಕಾಲೇಜು ಶುರುವಾಗುವಂತೆ ಮಾಡಿದರು ಎಂದು ಹೇಳುತ್ತಿದ್ದಾಗ ನಾನು ಮುಕ್ಕಾಲು ಶತಮಾನ ಹಿಂದಿನ ಧಾರವಾಡಕ್ಕೆ ಹೋಗಿರುತ್ತಿದ್ದೆ. ಮುಂದೆ ರೊದ್ದ ಶ್ರೀನಿವಾಸರಾವ ರಸ್ತೆ ( ಕಾಲೇಜು ರಸ್ತೆ)ಯಲ್ಲಿ ಬರುತ್ತಾ ಕಾಣುವ ಟೀಚರ್ಸ್‌ ಟ್ರೇನಿಂಗ್‌ ಕಾಲೇಜು ತೋರಿಸುತ್ತಾ ಡೆಪೂಟಿ ಚನ್ನಬಸಪ್ಪರ ಬಗ್ಗೆ ಹೇಳುತ್ತ, ಅದರೆದುರಿನಲ್ಲಿ ರೊದ್ದ ಶ್ರೀನಿವಾಸರಾಯರು (ಇಂಗ್ಲಂಡಿನ ಮಹಾರಾಣಿಯ ಪಟ್ಟಾಭಿಷೇಕದ ಬೆಳ್ಳಿಹಬ್ಬದ ಸಂದರ್ಭದಲ್ಲಿ ?) ನೆಟ್ಟ ಅರಳಿಮರವನ್ನು ತೋರಿಸಿ ಆಲೂರು ವೆಂಕಟರಾಯ ವೄತ್ತಕ್ಕೆ ಬರುವುದರಲ್ಲಿ ಧಾರವಾಡ ಉತ್ತರ ಕರ್ನಾಟಕದ ಶೈಕ್ಷಣಿಕ ಕೇಂದ್ರವಾದ ಪೂರ್ತಿ ಇತಿಹಾಸ ಹೇಳಿರುತ್ತಿದ್ದ.



ಅಲೂರು ವೆಂಕಟರಾಯ ವೄತ್ತದ ‘ಕರ್ನಾಟಕ ಇತಿಹಾಸ ಸಂಶೋಧನಾ ಸಂಸ್ಥೆ’ಯ ಕಟ್ಟಡ ನೋಡಿದೊಡನೆ ಅಪ್ಪನ ಮಾತು ಕರ್ನಾಟಕ ಏಕೀಕರಣದ ಕಡೆಗೆ ಹರಿಯುತ್ತಿತ್ತು. ಕನ್ನಡ ಕುಲಪುರೋಹಿತ ಆಲೂರರ ಕರ್ನಾಟಕದ ದರ್ಶನ ಬರೀ ಭಾವನಾತ್ಮಕವಾಗಿರದೇ, ವಾಸ್ತವಿಕ ನೆಲೆಗಟ್ಟಿನ ಮೇಲೆ ನಿಂತು ಪರಿಪೂರ್ಣವಾಗಿತ್ತು ಎಂದು ವಿವರಿಸಿ , ಅವರ ಪ್ರೇರಣೆಯಿಂದ ಕೆಲಸಮಾಡಲು ಶುರು ಮಾಡಿದ ರಾ.ಸ್ವಾ. ಪಂಚಮುಖಿ, ನಾ.ಶ್ರೀ ರಾಜಪುರೋಹಿತ ಮುಂತಾದವರು ಮಾಡಿದ ಇತಿಹಾಸ ಸಂಶೋಧನೆಯನ್ನು ನೆನಸಿಕೊಂಡು, ಆ ಕಟ್ಟಡದಲ್ಲಿದ್ದ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಒಂದು ಸುತ್ತು ಹೊಡಿಸಿ, ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೊಂದು ರೌಂಡು ಹೊಡೆದು ಬರುವಷ್ಟರಲ್ಲಿ ಏಕೀಕರಣದ ಉಜರಣೆ ಆಗಿರುತ್ತಿತ್ತು. ಜಕಣಿ ಭಾವಿ ಹತ್ತಿರದಲ್ಲಿದ್ದ ವೀರಗಲ್ಲನ್ನು ತೋರಿಸುವುದರೊಂದಿಗೆ ಖಿಲಾಫತ ಚಳುವಳಿಯ ಕಥೆ ಶುರುಮಾಡಿ ಒಟ್ಟು ಸ್ವಾತಂತ್ರ್ಯ ಚಳುವಳಿಯ ಅವಲೋಕನವನ್ನು ಅಪ್ಪ ಮಾಡಿಸುತ್ತಿದ್ದ.



ಅದಾಗಲೇ ಇಪ್ಪತ್ತು-ಇಪ್ಪತ್ತೈದು ವರುಷ ಮಾಸ್ತರಿಕೆ ಮಾಡಿದ್ದ ಅಪ್ಪ, ಹುಡುಗರನ್ನು ಹಿಡಿದಿಡುವಂತೆ ಮಾತನಾಡುವ ಕಲೆಯನ್ನು ಕೈಗತಮಾಡಿ ಕೊಂಡಿದ್ದರಲ್ಲಿ ಯಾವುದೇ ವಿಶೇಷವಿರದೇ ಇರಬಹುದು, ಆದರೆ ಗೂಗಲ್‌ ಇರದ ಆ ದಿನಗಳಲ್ಲಿ ಅಷ್ಟೆಲ್ಲಾ ಮಾಹಿತಿ ಸಂಗ್ರಹಿಸಿ, ಉತ್ಸಾಹದಿಂದ ಹುಡುಗರಿಗೆ ಹೇಳುತ್ತಿದ್ದುದು ಅಪ್ಪನ ಹಿರಿಮೆಯೆಂದೇ ಹೇಳಬೇಕು.

12ನೇ ಈಯತ್ತೆ ಮುಗಿದ ಮೇಲೆ ನಾನು ಧಾರವಾಡದಲ್ಲಿಯೇ ಇಂಜನೀಯರಿಂಗ ಓದಲು ತೊಡಗಿದ ನಂತರ ಅಪ್ಪ ನನ್ನ ಜೀವನದಲ್ಲಿ ಮೂರನೇ ಪಾತ್ರ- ಗೆಳೆಯನಾಗಿ ನಿಭಾಯಿಸತೊಡಗಿದ. ಧಾರವಾಡಕ್ಕೆ ನನ್ನ ಭೇಟಿಗೆ ಬಂದಾಗ ಮೊದಲಿನಂತೆ 'ಹೊಟ್ಟಿಗೆ' ಎಂದು ಅವ್ವ ಕಟ್ಟಿದ ತಿನಿಸು, 'ನೆತ್ತಿಗೆ' ಎಂದು ಪುಸ್ತಕ ತರುತ್ತಿದ್ದನಾದರೂ, ಆಗಾಗ ನನ್ನನ್ನೂ ಪುಸ್ತಕ ಅಂಗಡಿಗಳಿಗೆ ಕರೆದುಕೊಂಡು ಹೋಗುತ್ತಿದ್ದ. ಹಾಗೇಯೆ 'ಭಾಳ ದಿವಸಾತು ಉಪವನ್ದಾಗ ದ್ವಾಸಿ ತಿಂದು… ಹೋಗುಣು ನಡಿಯಲೆ' ಎಂದು ಆಜಾದ ಪಾರ್ಕ ಬದಿಯಲ್ಲಿದ್ದ ‘ಹೋಟಲ್‌ ಉಪವನ’ಕ್ಕೆ ದಬ್ಬಿಕೊಂಡುಹೋಗುತ್ತಿದ್ದ. ಅಜಾದ್‌ ಪಾರ್ಕಿಗೆ ಒಂದು ಬದಿಯಿಂದ ತೆರೆದುಕೊಂಡಿದ್ದ ಉಪವನ ಹೋಟಲು ಅಪ್ಪನ ಪ್ರೀತಿಯ ಜಾಗಗಳಲ್ಲಿ ಒಂದು. ಆಗೀಗ ಕಾಲಿಗೆ ತೊಡರುತ್ತಿದ್ದ ಐತಿಹಾಸಿಕ ಕುರುಹುಗಳು ಅಪ್ಪನಿಗೆ ತನ್ನ 'ಗುರು' ಪಾತ್ರವನ್ನು ನೆನಪಿಸುತ್ತಿದ್ದವು. ಕಿಟ್ಟಲ್‌ ಕಾಲೇಜು ಮುಂದೆ ಹೋಗುತ್ತಿದ್ದಾಗ ಅಪ್ಪ ಯುರೋಪಿನಲ್ಲಿ ಧಾರ್ಮಿಕ ಅಂಧಕ್ಕಾರ ಜಾರಿಯಲ್ಲಿದ್ದಾಗ, ಅದನ್ನು ವಿರೋಧಿಸಿ ಪ್ರೊಟೆಸ್ಟಂಟರು ಬಂಡೆದ್ದುದು, ನಂತರ ಕ್ಯಾಥೋಲಿಕ್ಕರು ಜಾಗ್ರತಿಗೊಂಡಿದ್ದರಿಂದ ಶುರುಮಾಡಿ, ಕಿಟ್ಟೆಲ-ಮೋಗ್ಲಿಂಗ ಇತ್ಯಾದಿ ಮಹಾನುಭಾವರ ಕನ್ನಡ ಸೇವೆಯವರೆಗೆ ಅಪ್ಪನ ವಿವರಣೆಯಿರುತ್ತಿತ್ತು. ಹಾಗೆಯೇ ಕಲಾಭವನದ ಆವರಣದಲ್ಲಿರುವ ಬೇಂದ್ರೆ ಮೂರ್ತಿ ನೋಡಿ ಬೇಂದ್ರೆಯವರ ಸರಳವಾಗಿ ಅರ್ಥವಾಗದ, ಸರಳವೆನಿಸಿದರೂ ಸಂಕೀರ್ಣ ಅರ್ಥದ ಕವಿತೆಗಳು ನೆನಪಿನಿಂದಲೆ ಹೇಳಿ, ಅವುಗಳನ್ನು ವಿವರಿಸುತ್ತಿದ್ದ. ಬೇಂದ್ರೆಯವರನ್ನು ತಾನು ಭೇಟಿಯಾದ, ಅವರನ್ನು ತಮ್ಮ ಶಾಲೆಯ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋದದ್ದು ( 1970?) ನೆನಪುಮಾಡಿಕೊಳ್ಳುತ್ತಿದ್ದ. ಅಂದಹಾಗೆ, ಬೇಂದ್ರೆ ಕಾವ್ಯದ ಬಗ್ಗೆ ಹುಚ್ಚು ಎನ್ನುವಷ್ಟರ ಮಟ್ಟಿಗೆ ಆಸಕ್ತಿ ಹೊಂದಿದ್ದ ಅಪ್ಪ, ಬೇಂದ್ರೆ ಕಾವ್ಯ ಮತ್ತು ಮತ್ತೊಬ್ಬ ಹಿಂದಿ ಕವಿ(ಯಾರು ??) ಕಾವ್ಯದ ನಡುವಿನ ಹೋಲಿಕೆಗಳ ಬಗ್ಗೆ ಪಿ ಎಚ್ ಡಿ ಮಾಡಲು ರಜಿಸ್ಟರ್ ಮಾಡಿಸಿದ್ದನಂತೆ. ಆದರೆ ಮಕ್ಕಳು ಮರಿಗಳಾಗಿ ಸಂಸಾರದ ಭಾರ ಹೆಚ್ಚಾದ ಮೇಲೆ ಅದನ್ನು ಅರ್ಧಕ್ಕೆ ಬಿಟ್ಟಿದ್ದನಂತೆ.



ನಾನು ಕಾಲೇಜು ಮುಗಿಸಿ ಬೆಂಗಳೂರು ಸೇರಿದ ಮೇಲೂ ಅಪ್ಪ-ನನ್ನ ಸ್ನೇಹ ಬಹಳವೇನು ಬದಲಾಗದೇ ಮುಂದುವರಿದಿತ್ತು. ಮನೋಹರ ಗ್ರಂಥಮಾಲೆ / ಸಮಾಜ ಪುಸ್ತಕಾಲಯಗಳ ಬದಲು ಅಂಕಿತ ಪುಸ್ತಕ/ ಸಪ್ನಾ ಬುಕ್ ಹೌಸ್‌ಗಳು, ಹೋಟಲ್‌ ಉಪವನ ಬದಲು ವಿದ್ಯಾರ್ಥಿ ಭವನ/ ಕಾಮತ ಯಾತ್ರಿನಿವಾಸ ಬಂದಿದ್ದವು. "ನಾನು ಒಂದ್ಸಲ ಪೇಪರ್‌ ಚೆಕ್ಕಿಂಗಿಗೆ ಬಂದಾಗ, ಇಲ್ಲೇ.. " ಎಂದು ಅಪ್ಪ ಬೆಂಗಳೂರಿನ ಹಳೆಯ ಬೇರುಗಳನ್ನು ತಡಕಲು ಪ್ರಯತ್ನಿಸುತ್ತಿದ್ದನಾದರೂ ನಿತ್ಯ ಬದಲಾಗುವ ಬೆಂಗಳೂರಿನಲ್ಲಿ ಹಳೆಯ ಕುರುಹುಗಳು ಅಳಿಸಿರುತ್ತಿದ್ದರಿಂದ ಗಾಡಿ ಮುಂದುವರಿಯುತ್ತಿರಲಿಲ್ಲ.. !

--------------------------------------------------------------------------------------


ಅಪ್ಪನ ವ್ಯಕ್ತಿತ್ವದಲ್ಲಿ ಹಲವು ಕುಂದುಗಳಿದ್ದವು- ಪ್ರಶ್ನೆಯೇ ಇಲ್ಲ. ಆದರೆ ಎಷ್ಟೇ ವಯಸ್ಸಾದರೂ ಏನಾದರೂ ಹೊಸತನ್ನು ಕಲಿಯುವ ಅಪ್ಪನ ಬಾಲಕುತೂಹಲ ಯಾರಿಗಾದರೂ ಅನುಕರಣೀಯ. ಹಾಗೆಯೇ ಅವನ ಆರ್ಥಿಕ ಶಿಸ್ತು ಕೂಡ- ಸೊನ್ನೆಯಿಂದ ಜೀವನ ಶುರುಮಾಡಿ, ತನ್ನ ಚಿಕ್ಕ ಪಗಾರದಲ್ಲಿಯೇ , ಸಾಲ ಮಾಡದೇ, ಆರು ಜನರ ಸಂಸಾರ ಸಾಗಿಸಿ, ಮಕ್ಕಳಿಗೆಲ್ಲ ಅವರು ಓದುತ್ತೇನೆಂದ ಕೋರ್ಸ್ ಓದಿಸಿ, ನಡುವೆ ಸಂಬಂಧಿಗಳ ಮಕ್ಕಳನ್ನು ಮನೆಯಲ್ಲಿಟ್ಟುಕೊಂಡು ಸಾಲಿ ಕಲಿಸಿದ್ದು ಅಪ್ಪನ ಆರ್ಥಿಕ ಶಿಸ್ತಿಗೆ ಸಾಕ್ಷಿ.

ಸುಮಾರು ಮೂವತ್ತೈದು ವರುಷ ನನಗೆ ತಂದೆಯಷ್ಟೇ ಅಲ್ಲ, ಗುರುವಾಗಿ, ಸ್ನೇಹಿತನಾಗಿ, ಮಾರ್ಗದರ್ಶಿಯಾಗಿ ಅಪ್ಪ ಒದಗಿಸಿದ ದಿವ್ಯ ಸಾಂಗತ್ಯದ ಋಣವನ್ನು ಹೇಗೆ ತೀರಿಸಲಿ ಎಂದು ಯೋಚಿಸುತ್ತೇನೆ. 'ನಾವಿಬ್ಬರು, ನಮಗೊಬ್ಬನೆ' ತತ್ವಕ್ಕೆ ನಾನು- ನನ್ನ ಶ್ರೀಮತಿ ಬದ್ಧರಾಗಿರುವುದರಿಂದ, ಮತ್ತು ನಮಗೀಗಾಲೆ ಒಬ್ಬ ಮಗನಿರುವುದರಿಂದ, ಅಪ್ಪನಿಗೆ 'ಮತ್ತೆ ನನ್ನ ಮಗನಾಗಿ ಹುಟ್ಟಿ ಬಾ' ಎಂದು ಬೇಡಿಕೊಳ್ಳುವಂತಿಲ್ಲ. ನನ್ನ ಮಗನಿಗೆ ಇನ್ನೂ ಒಳ್ಳೆಯ ತಂದೆಯಾಗುವುದೇ ಬಹುಷಃ ನಾನು ಅಪ್ಪನ ಋಣವನ್ನು ತೀರಿಸುವ ಏಕೈಕ ಮಾರ್ಗ....

2 comments:

Nagaraj Hiremath said...

Good one Gurya....

Sachin said...

Gurur tumba chendagi baridayappa!
Nanagu nimma shirolada manige namma occassional visit golu nenapadavu!